ಕ್ರಿಮಿನಲ್ ಪ್ರೊಸೀಜರ್ ಕೋಡ್	
ಅಪರಾಧಿಕ ಮೊಕದ್ದಮೆಗಳು ನಡೆಯುವ ವಿಧಾನವನ್ನು ಸೂಚಿಸುವ ಭಾರತೀಯ ಕಾಯಿದೆ (ದಂಡಪ್ರಕ್ರಿಯಾ ಸಂಹಿತೆ). 1898ರಲ್ಲಿ ಇದು ಜಾರಿಗೆ ಬಂತು. ಕೆಲವೊಂದು ಚಿಕ್ಕಪುಟ್ಟ ತಿದ್ದುಪಡಿಗಳೊಂದಿಗೆ ಇಂದಿಗೂ ಭಾರತದ ಎಲ್ಲ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿದೆ.

ಭಾರತೀಯ ದಂಡಸಂಹಿತೆ ಮತ್ತು ಇತರ ಕಾಯಿದೆಗಳ ಪ್ರಕಾರ ಅಪರಾಧದ ಪರಿಮಾಣಕ್ಕೆ ತಕ್ಕ ಶಿಕ್ಷೆ ವಿಧಿಸುವ ವಿಧಾನ, ವಿಚಾರಣೆಯ ರೀತಿ, ಕಾನೂನಿನ ಪ್ರಕಾರ ಆಪಾದಿತನಿಗೆ ಸಿಗಬಹುದಾದ ಸವಲತ್ತು ಮುಂತಾದವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ನಿರ್ದಿಷ್ಟಗೊಳಿಸುತ್ತದೆ. ಅಪರಾಧಗಳ ವಿಚಾರಣೆಯನ್ನು ಒಂದು ನಿರ್ದಿಷ್ಟವಾದ ವಿಧಾನಕ್ಕೊಳಪಡಿಸುವುದು ಕ್ರಿಮಿನಲ್ ಪ್ರೊಸೀಜರ್ ಕೋಡಿನ ಉದ್ದೇಶ. ಈ ಕಾಯಿದೆ ಸ್ಥೂಲವಾಗಿ ಈ ಕೆಳಗಿನ ಮೂರು ನಿರ್ದಿಷ್ಟ ವಿಷಯಗಳ ವಿವೇಚನೆಯನ್ನು ಒಳಗೊಂಡಿದೆ: 1. ನ್ಯಾಯಾಲಯಗಳ ರಚನೆ ಹಾಗೂ ಅಧಿಕಾರ ವ್ಯಾಪ್ತಿ, ಎಂದರೆ ನ್ಯಾಯಾಲಯಗಳ ಸ್ಥಾಪನೆ, ದಂಡದ ಪ್ರಮಾಣಕ್ಕೆ ಅನುಗುಣವಾಗಿ ಹಾಗೂ ಭೌಗೋಳಿಕವಾಗಿ ಅವುಗಳ ಅಧಿಕಾರವ್ಯಾಪ್ತಿ, 2. ಅಪರಾಧಿಕ ಮೊಕದ್ದಮೆಗಳು ನಡೆಯುವ ವಿಧಾನ. ಕಾನೂನು ಹಾಗೂ ಘಟನೆಗಳ ಸಮನ್ವಯದಿಂದ ಆಪಾದಿತನಿಗೆ ಯೋಗ್ಯವಿಚಾರಣೆ ಹಾಗೂ ಯೋಗ್ಯ ನಿರ್ಣಯ ದೊರಕುವ ಅವಕಾಶವನ್ನೊದಗಿಸುವುದು. ಉದಾ: ಭಾರತದ ಸಂವಿಧಾನದ ಪ್ರಕಾರ ಯಾವುದೇ ನಾಗರಿಕನ ಜೀವ ಅಥವಾ ಸ್ವಾತಂತ್ರ್ಯವನ್ನು ಕಾನೂನಿನ ಮೂಲಕ ನಿರ್ದಿಷ್ಟಪಡಿಸಲಾದ ಪ್ರಕ್ರಿಯೆಯ ಹೊರತಾಗಿ ಹರಣ ಮಾಡುವುದನ್ನು ಅಥವಾ ಮೊಟಕು ಮಾಡುವುದನ್ನು ನಿರ್ಬಂಧಿಸಿದೆ. ಪ್ರತಿಯೊಬ್ಬ ಆಪಾದಿತನೂ ವಿಚಾರಣೆಗೊಳಪಟ್ಟು ತೀರ್ಪು ನೀಡುವವರೆಗೆ ನಿರಪರಾಧಿಯೆಂದು ತಿಳಿಯಲ್ಪಡತಕ್ಕದ್ದೆಂಬುದು ಕಾನೂನಿನ ತತ್ತ್ವ. ಸರ್ಕಾರ ಈ ಬಗ್ಗೆ ನಿರ್ದಿಷ್ಟಪಡಿಸಿದ ವಿಚಾರಣೆಯ ವಿಧಾನವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್‍ನಲ್ಲಿ ವಿವರಿಸಲಾಗಿದೆ. ಈ ಕಾಯಿದೆ ಸಹಜ ನ್ಯಾಯಗಳ ತಳಹದಿಯ ಆಧಾರದ ಮೇಲೆ ನಿರ್ದಿಷ್ಟಪಡಿಸಿದ್ದಾಗಿದೆ. ಆದ್ದರಿಂದ ಈ ಸಂಹಿತೆಯಲ್ಲಿ ಹೇಳಿರುವ ಪ್ರಕಾರಕ್ಕೆ ಹೊರತಾಗಿ ಬೇರೆ ಯಾವ ವಿಧಾನದಿಂದಲೂ ವ್ಯಕ್ತಿಯೊಬ್ಬನ ಸ್ವಾತಂತ್ರ್ಯ ಅಥವಾ ಜೀವವನ್ನು ಕಸಿದುಕೊಳ್ಳುವಂತಿಲ್ಲ. 3. ಅಪರಾಧಗಳನ್ನು ಸಾಧ್ಯವಾದ ಮಟ್ಟಿಗೆ ಪೂರ್ವಭಾವಿಯಾಗಿ ತಡೆಗಟ್ಟುವ ಬಗ್ಗೆ ಕ್ರಮಗಳನ್ನು ನಿರ್ದಿಷ್ಟಪಡಿಸುವುದು ಕ್ರಿಮಿನಲ್ ಪ್ರೊಸೀಜರ್ ಕೋಡ್‍ನ ಇನ್ನೊಂದು ಉದ್ದೇಶ. ಉದಾ: ಗಲಭೆ ಮುಂತಾದವು ಸಂಭವಿಸುವ ಸಂದರ್ಭದಲ್ಲಿ ಈ ಸಂಹಿತೆಯ 144ನೆಯ ಕಾಲಂ ಜಾರಿ ಮಾಡಲಾಗುವುದು. ಅದು ಸಭೆ ಮೆರವಣಿಗೆಗಳನ್ನು ನಿರ್ಬಂಧಿಸುತ್ತದೆ ಮತ್ತು ಆ ಮೂಲಕ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.         					 (ಬಿ.ಡಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ